Monday, January 19, 2015

ಕರ್ತವ್ಯ ಪಾಲನೆ

ದಬ್... ಧಬ್ ಧಬ್.. ಧಭ್ ಧಭ್..

* : 'ಹಾಕ್.. ಹಂಗೆ ಹಾಕ್ರಿ, ಇನ್ನೊಂದು ನಾಲ್ಕು ಹಾಕ್ರಿ ಆ ನನ್ಮಗಂಗೆ '

~ : ' ಸರ್ ಸರ್ ಏನಾಯ್ತು ಯಾಕೆ ಹಂಗ್ ಹೊಡಿತಿದೀರಾ ಅವನಿಗೆ ? '

* : 'ಅಯ್ಯೊ ನಂದೇ ನನಗಾಗಿದೆ, ಅರ್ಜೆಂಟ್ ಆಗಿ ಆಫೀಸಿಗೆ ಹೋಗ್ಬೇಕು, ಮಧ್ಯದಲ್ಲಿ ನಿಮ್ದೊಳ್ಳೆ.. ಅರೆ ನೀವ್ಯಾಕೆ ನಿಲ್ಲಿಸ್ಬಿಟ್ರಿ ಹಾಕ್ರಿ  ಇನ್ನೊಂದೆರಡು ಅವಂಗೆ'

ದಬ್ ದಬ್ ದಬ್...

~ : 'ಅಲ್ಲ ಸರ್ ನೀವೂ ಹೊಡೀತಿದೀರಲ್ಲಾ ಯಾರದು? ಯಾಕೆ ಅಂತ? '

* : ' ಹೇ ಯಾವನಿಗ್ಗೊತ್ತು ಹೋಗ್ರಿರೀ.. ಯಾವನೋ ಬಗ್ಗಿ ನಿಂತಿದ್ದ, ನಾಲ್ಕು ಜನ ಸರ್ರಿಯಾಗಿ ತದಕುತಿದ್ದರು ಅವನಿಗೆ,  ಪಾಪ ಬಗ್ಗಿದವನೆಲ್ಲಿ ಬೇಜಾರು ಮಾಡ್ಕೊತಾನೊ ಅಂತ ನಾನೂ ಒಂದ್ ನಾಲ್ಕು ಗುದ್ದಿದೆ ಅಷ್ಟೆ.. ಛೇ ಅರ್ಜೆಂಟ್ ಆಗಿ ಆಫೀಸಿಗೆ ಬೇರೆ ಹೋಗ್ಬೇಕು ನಾನು... ಆಟೋ...'

~ : ' ಹಾಂ..!!'

Wednesday, March 20, 2013

~ರೋಗ..

~"ಲೋ.."

*"ಹ್ಮ್.."

~"ಲೋ‍....."

*"ಹ್ಮ್...."

~"ಲೋ ಕೇಳ್ತಿಯಾ ಇಲ್ವಾ ನಾನು ಹೇಳೋದು?"

*"ಕೇಳ್ತಿರೋದಕ್ಕೇ ಉತ್ತರ ಕೊಡ್ತಿರೋದು."

~"ಮತ್ತೆ ನನ್ನ ಕಡೆ ನೋಡ್ತಾನೇ ಇಲ್ಲ. ಆಕಡೆ ನಿನ್ನ ಪಾಡಿಗೆ ನೀನು ಏನೋ ಮಾಡ್ತಿದಿಯ..?"

*"ನಮ್ಕಡೆ ಮನುಷ್ಯರೆಲ್ಲಾ ಕಿವಿಯಿಂದಾನೆ ಕೇಳೋದು, ಕಣ್ಣಿಂದಲ್ಲ. ನಿಮ್ಕಡೆ ಹಂಗೆನಾದ್ರೂ ಇದೆಯಾ? ನಿನ್ನ ಮಾತು ಕೇಳ್ಲಿಕ್ಕೆ ನಿನ್ನ ಕಡೆ ಯಾಕೆ ನೋಡ್ಬೇಕು?"

~"ಅಯ್ಯೋ.. ತಪ್ಪಾಯ್ತು ಕ್ಷಮಿಸಿ ಬಿಡು. ಏನೋ ಕೇಳ್ಲಿಕ್ಕೆ ಬಂದ್ರೆ ಬೇರೆ ಏನೋ ಶುರು ಮಾಡ್ಕೊಂಡ್ಬಿಡ್ತೀಯ.."

*"ಸರಿ.. ಏನು ಹೇಳು.."

~"ನಂಗೆ ಒಂದು ಸಮಸ್ಯೆ ಇದೆ."

*"ಅದ್ಭುತ!! ಆಶ್ಚರ್ಯ! ಸಾಮಾನ್ಯವಾಗಿ ಜನರಿಗೆ ಬಹಳಷ್ಟು ಸಮಸ್ಯೆ ಇರ್ತಾವೆ, ನಿಂಗೆ ನೋಡಿದ್ರೆ ಒಂದೇ ಇದೆ ಅಂದ್ರೆ ಪುಣ್ಯವಂತ ಕಣಯ್ಯಾ ನೀನು."

~"ಹ್ಮ್ಮ್.. ನನಗೂ ಸಾವಿರಾರಿದೆ. ಆದ್ರೆ ನಿನ್ನಹತ್ರ ಹೇಳ್ಲಿಕ್ಕೆ ಬಂದಿದ್ದು ಒಂದರ ಬಗ್ಗೆ ಮಾತ್ರ."

*"ಅಷ್ಟೇನಾ.. ಸರಿ ಮುಂದುವರಿಸು..."

~"ಸಮಸ್ಯೆ ಸ್ವಲ್ಪ ವಿಚಿತ್ರವಾಗಿದೆ. ಎಲ್ಲಿಂದ ಶುರು ಮಾಡೋದು ಅಂತಾನೆ ಗೊತ್ತಾಗ್ತಿಲ್ಲ."

*"ಹೌದಾ? ಹೋಗ್ಲಿ ಬಿಡು ಏನ್ ಹೇಳ್ತೀಯಾ."

~"ಅಯ್ಯೋ.. ಕೇಳಪ್ಪಾ. ಬರೇ ತಮಾಷೆನೇ ಆಯ್ತು ನಿಂದು."

*"ಹೇಳು ಮತ್ತೆ. ಅದು ಬಿಟ್ಟು ಬೇರೆ ಎಲ್ಲಾ ಹೇಳ್ತೀಯ."

~"ಏನಂದ್ರೆ, ನನಗೆ ಈ ಇತಿ-ಮಿತಿ ಅಂತಾರಲ್ಲ ಅದೆಲ್ಲಾ ಗೊತ್ತೇ ಆಗಲ್ಲ."

*"ಅಂದ್ರೆ?"

~"ಅಂದ್ರೆ, ಹ್ಯಾಗೆ ಹೇಳ್ಲಿ ನಿಂಗೆ, ಸರಿ ಒಂದೆರಡು ಉದಾಹರಣೆ ಕೊಡ್ತೀನಿ ಕೇಳು."

*"ಸರಿ."

~"ನಿಮ್ಮ ಮನೆಗೆ ಯಾರೋ ಸಹಾಯ ಕೇಳ್ಲಿಕ್ಕೆ ಬರ್ತಾರೆ ಅಂತ ಇಟ್ಕೊ."

*"ಸರಿ ಬಂದ್ರು."

~"ಸರ್ ಅದು ಮಾಡ್ತಿದೀವಿ ಇದು ಮಾಡ್ತಿದೀವಿ. ಏನೋ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಅಂತ ಕೇಳ್ತಾರೆ."

*"ಹೌದು ಕೇಳೇ ಕೇಳ್ತಾರೆ."

~"ಅವಾಗ್ಲೇ ನೋಡು ಸಮಸ್ಯೆ ಶುರು ಆಗೋದು."

*"ಏನು? ದುಡ್ಡಿರಲ್ಲ ಅಂತಾನಾ?"

~"ಛೇ ಛೇ. ಅಲ್ಲ.. ನಂಗೂ ಸಹಾಯ ಮಾಡ್ಬೇಕು ಅಂತಾನೇ ಇರುತ್ತೆ. ಆದ್ರೆ ಈ 'ಕೈಲಾದಷ್ಟು' ಅಂದ್ರೆ ಎಷ್ಟು ಅಂತ ನಿರ್ಧಾರ ಮಾಡೋಕೆ ಆಗಲ್ಲ."

*"'ಕೈಲಾದಷ್ಟು' ಅಂದ್ರೆ ಎಷ್ಟೋ ಒಂದು ಅಂತ. ಹತ್ತೋ ಇಪ್ಪತ್ತೋ ಕೊಟ್ಟು ಕಳಿಸ್ಬೇಕು."

~"ಅದರರ್ಥ ನನ್ನ ಕೈಯಲ್ಲಿ ಮೂವತ್ತು ರುಪಾಯಿ ಕೊಡೋಕೆ ಆಗಲ್ಲ ಅಂತಾನಾ? ಮೊವತ್ತು ಕೊಡೋಕೆ ಹೋದಾಗ ನಲವತ್ಯಾಕೆ ಕೊಡಬಾರದು ಅನ್ಸುತ್ತೆ."

*"!!"

~"ನನ್ಹತ್ರ ಪೂರ್ತಿ ೨೦೦೦ ರುಪಾಯಿ ಇದ್ರೆ ಅದರಲ್ಲಿ ಎಲ್ಲಿಯವರೆಗೆ ನಾನು ಹೀಗೆ ಕೊಡಬಹುದು ಅಂತಾನೇ ಗೊತ್ತಾಗಲ್ಲ."

*"ನೀನು ಕರ್ಣನ ಮರಿ ಮೊಮ್ಮಗ ಆದ್ರೂ ಕೂಡ, ಅಬ್ಬಬ್ಬಾ ಅಂದ್ರೆ ೧೦೦೦ ರುಪಾಯಿವರೆಗೆ ಕೊಡಬಹುದು ಅಷ್ಟೆ. ಇರೋ ದುಡ್ಡಲ್ಲಿ ಅರ್ಧಕ್ಕಿಂತ ಜಾಸ್ತಿ ದಾನ ಮಾಡಿದ್ರೆ ಹೊಟ್ಟೆಗೆ ಬಟ್ಟೆಗೆ ಏನ್ ಮಾಡ್ತೀಯಾ?"

~"ಸಮಸ್ಯೆ ಅಂದ್ರೆ ಅದೇನೇ. ಇದೇನು ಸಾವಿರ ರುಪಾಯಿ ಅಂದೆಯಲ್ಲಾ, ನಂಗೆ ಅದನ್ನ ಗುರುತಿಸೋಕೆ ಆಗಲ್ಲ. ೧೦೦೦ ಕೊಡ್ತಿರಬೇಕಾದ್ರೆ ನಾನು ೧೦೦೧ ಕೊಟ್ರೆ ಏನಾದ್ರೂ ದಿವಾಳಿ ಎದ್ದು ಹೋಗ್ತೀನಾ ಅನ್ಸುತ್ತೆ. ಹೀಗೆ ಅದು ೨೦೦೦ ದವರೆಗೆ ಅಥವಾ ಅದನ್ನ ದಾಟಿ ಮುಂದೆ ಕೂಡ ಹೊರಟ್ಹೋಗುತ್ತೆ."

*"ಮತ್ತೆ ಏನ್ ಮಾಡ್ತೀಯ ಹೀಗೆಲ್ಲಾ ಆದಾಗ?"

~"ಒಂದೊಂದು ಸರ್ತಿ ಒಂದೊಂದು ರೀತಿ. ಕೆಲವೊಂದು ಸರ್ತಿ ಕೊಡಲ್ಲ ಅಂತೀನಿ. ಕೆಲವೊಂದು ಸರ್ತಿ ಎಷ್ಟೋ ಕೊಟ್ಟು ಕಳಿಸ್ತೀನಿ"

*"ಹ್ಮ್"

~"ಇದೇ ರೀತಿ ಇನ್ನೊಂದಿಷ್ಟಿದೆ. ತುಂಬಾ ದೂರ ಅಂದ್ರೆ ಯಾವುದು, ಎಷ್ಟು ಹೊತ್ತಾದ್ರೆ ಸಿಕ್ಕಾಪಟ್ಟೆ ಕಾದೆ ಅಂತ ಹೇಳ್ಬೇಕು, ಕೊರೆಯೋ ಚಳಿ ಅಂದ್ರೆ ಯಾವ್ದು ಅಂತೆಲ್ಲಾ ಹೇಳೋಕೇ ಬರಲ್ಲ ನಂಗೆ. ಈಗ ನಡ್ಕೊಂಡು ಹೋಗ್ತಿರ್ತೀನಿ, ಒಂದಿಷ್ಟು ದೂರ ಹೋದಮೇ.."

*"ಸಾಕು ಸಾಕು.. ಗೊತ್ತಾಯ್ತು ನೀನು ಏನ್ ಹೇಳ್ತಿದಿಯಾ ಅಂತ"

~"ಅಬ್ಬ"

*""

~"ಅಲ್ಲ, ಇದೇನಾದ್ರು ಒಂದು ರೀತಿ ರೋಗಾನಾ?"

*""

~"ಏನಾಯ್ತು, ಸುಮ್ನಾಗಿಬಿಟ್ಟೆಲ್ಯಾ?"

*"ಏನಿಲ್ಲ. ಯೋಚ್ನೆ ಮಾಡ್ತಿದ್ದೆ, ಹಿಂಗೆ ಬಹಳ ವಿಷಯಗಳಲ್ಲಿ ಇದೇ ರೀತಿ ಅನಿಸ್ತಾ ಇದ್ರೆ ಇದೊಂದು ರೋಗ ಅಂತಾನೇ ಹೇಳ್ಬಹುದು. ಆದ್ರೆ ಬಹಳ ಅಂದ್ರೆ ಎಷ್ಟು ಅಂತ ಯೋಚ್ನೆ ಮಾಡ್ತಿದ್ದೆ!"

~*~

ಶುರು..

*"ತನಾನ ತನ ನನಾ ನಾ.. ತನಾನ ತನ ನನಾ ನಾ"

~"ಏನಪ್ಪಾ ಕಾರಣ, ಇಷ್ಟೊಂದು ಖುಶಿಯಾಗಿದಿಯಾ?"

*"ಬಲು ವಿಚಿತ್ರ ರೀ ಜನ.. ಖುಶಿ ಖುಶಿಯಾಗಿರೋದಿಕ್ಕೂ ಒಂದು ಕಾರಣ ಬೇಕು ಅಂತಾರೆ.."

~"ಏನಂದೆ? ಕೇಳ್ಲಿಲ್ಲ"

*"ಏನಿಲ್ಲ ಬಿಡು.. :) ತನಾನ ತನ ನನಾ ನಾ.. ತನ ತನಾನ ತನ ನನಾ ನಾ"

~*~